ಚಿಕ್ಕನಾಯಕನಹಳ್ಳಿ 
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಪಶ್ಚಿಮದ ಒಂದು ತಾಲ್ಲೂಕು. ಆ ತಾಲ್ಲೂಕಿನ ಕಸಬಾ. ಉತ್ತರಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳು, ಪೂರ್ವಕ್ಕೆ ಶಿರಾ ಮತ್ತು ಗುಬ್ಬಿ ತಾಲ್ಲೂಕುಗಳು, ದಕ್ಷಿಣಕ್ಕೆ ತಿಪಟೂರು ತಾಲ್ಲೂಕು, ಪಶ್ಚಿಮಕ್ಕೆ ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕು-ಇವು ತಾಲ್ಲೂಕಿನ ಮೇರೆಗಳು. ಚಿಕ್ಕನಾಯಕನಹಳ್ಳಿ, ಶೆಟ್ಟಿಕೆರೆ, ಕಂದಿಕೆರೆ, ಹಂದನಕೆರೆ, ಹುಳಿಯಾರು ಹೋಬಳಿಗಳಾಗಿ ವಿಭಾಗವಾಗಿರುವ ತಾಲ್ಲೂಕಿನ ಒಟ್ಟು ಗ್ರಾಮಗಳ ಸಂಖ್ಯೆ 208. ಚಿಕ್ಕನಾಯಕನ ಹಳ್ಳಿ ಮತ್ತು ಹುಳಿಯಾರು ಪಟ್ಟಣಗಳು. ತಾಲ್ಲೂಕಿನ ವಿಸ್ತೀರ್ಣ 1,083.9 ಚ.ಕಿ.ಮೀ. ಜನಸಂಖ್ಯೆ 2,09,539 (2001). ಈ ತಾಲ್ಲೂಕು ತಿಪಟೂರು ಉಪವಿಭಾಗಕ್ಕೆ ಸೇರಿದೆ.
ತಾಲ್ಲೂಕಿನ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಸಮಾಂತರದಲ್ಲಿ ಸಾಗಿರುವ ತಗ್ಗಿನ ನಗ್ನ ಬೆಟ್ಟಗಳ ಮೂರು ಸಾಲುಗಳಿವೆ. ಇವುಗಳ ಮೇಲೆ ಬಿದ್ದ ಮಳೆನೀರು ಹರಿದು ಶಿರಾ ತಾಲ್ಲೂಕಿನಲ್ಲಿ ವೇದಾವತಿ ನದಿಯನ್ನು ಸೇರುತ್ತದೆ ಬೆಟ್ಟಗಳ ಶ್ರೇಣಿಯಲ್ಲಿ ಮ್ಯಾಂಗನೀಸಿನ ಮತ್ತು ಕೆಂಪು ಹಾಗೂ ಬಿಳಿಯ ಕವಿ ಮಣ್ಣಿನ ನಿಕ್ಷೇಪಗಳುಂಟು. ಬೆಟ್ಟಗಳ ನಡುವಣ ಕಣಿವೆಯ ನೆಲ ಫಲವತ್ತಾದ್ದು. ಇಲ್ಲಿ ತೆಂಗು ಮತ್ತು ಅಡಕೆ ತೋಟಗಳಿವೆ. ಸೆಟ್ಟಿಕೆರೆಯ ದಕ್ಷಿಣದಿಂದ ಉತ್ತರಕ್ಕೆ ಹುಳಿಯಾರಿನ ಕಡೆಗೂ ಯೆಳನಾಡಿನಿಂದ ಬೂದಿಹಾಳಿನ ವಾಯುವ್ಯದ ಕಡೆಯಲ್ಲಿ ಸಾಗಿ ವೇದಾವತಿಯನ್ನು ಸೇರಲು ಹೊಳಲ್ಕೆರೆ ತಾಲ್ಲೂಕಿನ ಕಡೆಗೂ ಎರಡು ತೊರೆಗಳು ಹರಿಯುತ್ತವೆ. ತಾಲ್ಲೂಕಿನ ಬೆಳೆಗಳು ರಾಗಿ, ಹುರುಳಿ, ಜೋಳ, ತೊಗರಿ, ತೆಂಗು, ಅಡಕೆ.

ಚಿಕ್ಕನಾಯಕನಹಳ್ಳಿ ಪಟ್ಟಣ ಈ ತಾಲ್ಲೂಕಿನ ಕಸಬ. ಉ.ಅ. 130 25' ಮತ್ತು ಪೊ.ರೇ. 760 4' ಮೇಲೆ, ತುರುವೆಕೇರೆ-ಹುಳಿಯಾರು ರಸ್ತೆಯಲ್ಲಿ, ಬೆಂಗಳೂರು-ಶಿವಮೊಗ್ಗ ರಸ್ತೆಗೆ 8 ಮೈ ಉತ್ತರದಲ್ಲಿದೆ. ಬೆಂಗಳೂರು-ಪುಣೆ ರೈಲುಮಾರ್ಗದ ಬಾಣಾವರ ನಿಲ್ದಾಣದಿಂದ ಇಲ್ಲಿಗೆ ಸು. 11 ಮೈ. ದೂರ. ಜನಸಂಖ್ಯೆ 22,360 (2001). ಇಲ್ಲೊಂದು ಪುರಸಭೆ ಇದೆ. ಹಾಗಲವಾಡಿ ಮನೆತನದ ಪಾಳೆಯಗಾರನಾಗಿದ್ದ ಚಿಕ್ಕನಾಯಕನಿಂದ ಊರಿಗೆ ಈ ಹೆಸರು ಬಂದಿದೆ. ಪರಶುರಾಮರಾಯನ ನೇತೃತ್ವದಲ್ಲಿ ಮರಾಠರ ಸೈನ್ಯ ಶ್ರೀರಂಗಪಟ್ಟಣದ ಬಳಿ ಬ್ರಿಟಿಷ್ ಸೈನ್ಯವನ್ನು ಸೇರಲು ಹೋಗುತ್ತಿದ್ದಾಗ ಹಾದಿಯಲ್ಲಿ ಈ ಪಟ್ಟಣವನ್ನು ಕೊಳ್ಳೆ ಹೊಡೆಯಿತೆಂದು ತಿಳಿದುಬರುತ್ತದೆ. ಚಿಕ್ಕನಾಯಕನಹಳ್ಳಿಯ ಸುತ್ತಮುತ್ತ ತೆಂಗು, ಅಡಕೆ ತೋಟಗಳಿವೆ. ಪಟ್ಟಣ ತಕ್ಕಮಟ್ಟಿಗೆ ಪ್ರವರ್ಧಮಾನವಾಗಿದೆ. ತೆಂಗು, ಅಡಕೆಗಳ ಬೇಸಾಯದ ಜೊತೆಗೆ ಕಂಬಳಿ ನೇಯುವುದೂ ಇಲ್ಲಿಯ ಒಂದು ಕಸಬು. ವಾರಕ್ಕೊಮ್ಮೆ ಇಲ್ಲಿ ಕೂಡುವ ಸಂತೆಯಲ್ಲಿ ಕಂಬಳಿಗಳು ವಿಶೇಷವಾಗಿ ಮಾರಾಟವಾಗುತ್ತವೆ. ವೆಂಕಟರಮಣಸ್ವಾಮಿಯ ದೇವಸ್ಥಾನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ದೊಡ್ಡ ಕಟ್ಟಡ. ಇಲ್ಲಿ ಹುಳಿಯಾರು ಆಂಜನೇಯ, ಬ್ರಹ್ಮಪುರಿ ಆಂಜನೇಯ ಎಂಬ ಎರಡು ಆಂಜನೇಯ ದೇವಸ್ಥಾನಗಳಿವೆ. ಮೊದಲನೆಯದು ದೊಡ್ಡದು. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಇನ್ನೊಂದು ದೇವಸ್ಥಾನ ರಾಮೇಶ್ವರನದು. ಇದನ್ನು ಹಾಗಲವಾಡಿ ಪಾಳೆಯಗಾರ ಕಟ್ಟಿಸಿದನೆಂದು ಹೇಳಲಾಗಿದೆ. ಊರಿನ ದೇವತೆ ಹಿರಿಮಾ ವರದಾ ಎಲ್ಲಮ್ಮ ಅಥವಾ ರೇಣುಕಾದೇವಿ. ಈಕೆಯ ಪ್ರತಿಮೆ ಮರದ್ದು. ಇದಕ್ಕೆ ಕಲ್ಲಿನಿಂದ ಕಡೆಯಲಾದ ಮುಖವಿದೆ. ಉತ್ಸವಮೂರ್ತಿ ಪರಶುರಾಮನದು. ಇವನು ರೇಣುಕೆಯ ಮಗ. ರೇಣುಕೆಯ ಗಂಡನಾದ ಜಮದಗ್ನಿಯ ಪ್ರತಿಮೆ ಆಕೆಯ ಬಲಕ್ಕೆ ಇದೆ. ತಾತಯ್ಯನ ಗೋರಿ ಎಂಬುದು ಒಬ್ಬ ಮುಸ್ಲಿಂ ಸಂತನದು. ಇವನಿಗೆ ಅನೇಕ ಹಿಂದೂ ಭಕ್ತರೂ ಇದ್ದಾರೆ. ವರ್ಷಕ್ಕೊಮ್ಮೆ ಇಲ್ಲಿ ಉರುಸ್ ನಡೆಯುತ್ತದೆ.

ದಬ್ಬೆ ಬೆಟ್ಟದಲ್ಲಿ 13ನೆಯ ಶತಮಾನದ ಮಹಾಲಿಂಗೇಶ್ವರ ದೇವಾಲಯವಿದೆ. ಅಲ್ಲಿಯ ಮೂರು ಗರ್ಭಗುಡಿಗಳಲ್ಲಿ ಹೊಯ್ಸಳೇಶ್ವರ, ಬ್ರಹ್ಮೇಶ್ವರ ಮತ್ತು ಮಾದೇಶ್ವರ ಲಿಂಗಗಳುಂಟು. ದೊಡ್ಡ ಬಿದರೆಯಲ್ಲಿ ಈಶ್ವರ ದೇವಾಲಯವಿದೆ. ಅಲ್ಲಿಯ ಪಾತಾಳ ಲಿಂಗೇಶ್ವರ ಗುಡಿಯಲ್ಲಿ 100 ಲಿಂಗಗಳಿವೆ. ಯಳನಾಡು ದ್ರಾವಿಡ ಶೈಲಿಯ ಸಿದ್ಧರಾಮೇಶ್ವರ ದೇವಾಲಯದಿಂದಾಗಿ ಪ್ರಸಿದ್ಧ. ವೀರಶೈವಗುರು ಸಿದ್ಧರಾಮ ಇಲ್ಲಿ ತಪಸ್ಸು ಮಾಡಿದ. ದೇವಾಲಯದ ಪೂಜಾಮೂರ್ತಿ ಲಿಂಗಾಕೃತಿಯ ಹುತ್ತ. ಹೊನ್ನೆಬಾಗಿ ಗ್ರಾಮಕ್ಕೆ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲೆ ರಂಗನಾಥಸ್ವಾಮಿ ಗುಡಿಯಿದೆ. ಹುಳಿಯಾರ್ ಇನ್ನೊಂದು ಐತಿಹಾಸಿಕ ಸ್ಥಳ. ಹೊಯ್ಸಳರ ಕಾಲದಲ್ಲಿ ಈ ಗ್ರಾಮದ ಹೆಸರು ಹುಲಿಯೇರು ಎಂದಿತ್ತು. ಇದು ಚಿಕ್ಕನಾಯಕನಹಳ್ಳಿಗೆ 14 ಮೈ. ದೂರದಲ್ಲಿದೆ. ಇಲ್ಲಿಯ ರಂಗನಾಥಸ್ವಾಮಿ ದೇವಾಲಯ ಹೊಯ್ಸಳರ ಕಾಲದ್ದು. ಕಂಡಿಕೆರೆ ಗ್ರಾಮದಲ್ಲಿ ಪುರಾತನ ಕೋಟೆಯಿದೆ. ಇದು ಈಗ ಪಾಳು ಬಿದ್ದಿದೆ. ಇಲ್ಲಿಯ ದೇವಾಲಯ ಗೋಪಾಲ ಕೃಷ್ಣನದು. ಮರುಳೆ ಗ್ರಾಮದಲ್ಲಿ ಕೆಲವು ಮಾಸ್ತಿ ಕಲ್ಲುಗಳೂ ಶೆಟ್ಟಿಕೆರೆಯಲ್ಲಿ ಯೋಗಮಾಧವ ಮತ್ತು ರಂಗನಾಥಸ್ವಾಮಿ ದೇವಾಲಯಗಳೂ ಇವೆ.

ಹುಳಿಯಾರು ಆಂಜನೇಯಸ್ವಾಮಿ, ಯಳನಾಡು ಸಿದ್ದರಾಮೇಶ್ವರ, ಗೋಡೆ ಕೆರೆಯ ಸಿದ್ಧರಾಮೇಶ್ವರ, ಕಾರೆಹಳ್ಳಿಯ ರಂಗನಾಥಸ್ವಾಮಿ ಜಾತ್ರೆಗಳು ಮತ್ತು ಉತ್ಸವಗಳು ಪ್ರಸಿದ್ಧವಾಗಿವೆ.				(ವಿ.ಜಿ.ಕೆ.; ಆರ್.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ